ಮಾಲವೀಯ, ಮದನ ಮೋಹನ
1861-1946. ರಾಷ್ಟ್ರೀಯನಾಯಕ. ಶಿಕ್ಷಣತಜ್ಞ, ಸಮಾಜಸುಧಾರಕ. ಅಲಹಾಬಾದಿನಲ್ಲಿ 1861 ಡಿಸೆಂಬರ್ 25ರಂದು ಜನಿಸಿದರು. ತಂದೆ ಪಂಡಿತ್ ವ್ರಜನಾಥ, ತಾಯಿ ಮೂನಾದೇವಿ.

	ಐದನೆಯ ವಯಸ್ಸಿನಲ್ಲೇ ಪಂಡಿತ ಹರದೇವರ ಧರ್ಮ ಜ್ಞಾನೋಪದೇಶ ಪಾಠಶಾಲೆಯಲ್ಲಿ ಸಂಸ್ಕøತ ಸಾಂಪ್ರದಾಯಿಕ ಶ್ಲೋಕಗಳ ಕಂಠಪಾಠದೊಂದಿಗೆ ಪ್ರಾಥಮಿಕಶಿಕ್ಷಣ ಮೊದಲಾಯಿತು. ಅನಂತರ ಜಿಲ್ಲಾಶಾಲೆಯ ಮೂರನೆಯ ತರಗತಿಗೆ ದಾಖಲಾದರು (1869). ತಂದೆ ಆಂಗ್ಲ ಮಾಧ್ಯಮಶಾಲೆಗೆ ಶುಲ್ಕ ತೆರುವ ಪರಿಸ್ಥಿತಿಯಲ್ಲಿ ಇಲ್ಲದಾಗ ತಾಯಿ ಮೂನಾದೇವಿ ಮಗನ ಅದಮ್ಯ ಉತ್ಸಾಹ ಕಂಡು ತನ್ನ ಚಿನ್ನದ ಬಳೆಯನ್ನೇ ಒತ್ತೆಯಿಟ್ಟು ಓದಿಗೆ ಅವಕಾಶ ಮಾಡಿಕೊಟ್ಟಳು. 1879ರಲ್ಲಿ ಮೆಟ್ರಿಕ್ಯುಲೇಶನ್ ಪಾಸಾದರು. ಬಳಿಕ ಮ್ಯೋರ್ ಸೆಂಟ್ರಲ್ ಕಾಲೇಜಿಗೆ ಸೇರಿ ಎಫ್.ಎ. ಪರೀಕ್ಷೆಯಲ್ಲೂ (1881) ಕಲ್ಕತ್ತೆಗೆ ಹೋಗಿ ಬಿ.ಎ. ಪರೀಕ್ಷೆಯಲ್ಲೂ (1884) ತೇರ್ಗಡೆ ಆದರು. ಮುಂದೆ ಎಂಎ. ಓದಬೇಕೆಂಬ ಅಭಿಲಾಷೆಯಿದ್ದರೂ ಬಡತನದ ಬೇಗೆಯಿಂದ ಸಾಧ್ಯವಾಗದೆ ತಾವು ಓದಿದ ಶಾಲೆಯಲ್ಲಿ ಉಪಾಧ್ಯಾಯವೃತ್ತಿ ಕೈಗೊಂಡರು (1885). ಮಿರ್ಜಾಪುರದ ಶಾಲಾ ಉಪಾಧ್ಯಾಯರಾದ ನಂದರಾಮರ ಮಗಳು, ಕುಂದನದೇವಿಯೊಂದಿಗೆ ಇವರ ವಿವಾಹವಾಯಿತು (1878).

	ಮಾಲವೀಯರ ಸಾರ್ವಜನಿಕ ಜೀವನ ಕಲ್ಕತ್ತೆಯಲ್ಲಿ ಜರುಗಿದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಭಾಗವಹಿಸುವುದರ ಮೂಲಕ ಪ್ರಾರಂಭವಾಯಿತು (1886). ಕಾಲೇಜಿನಲ್ಲಿ ಓದುತ್ತಿದ್ದಾಗ ಸಂಸ್ಕøತ ಪ್ರಾಧ್ಯಾಪಕ ಪಂಡಿತ್ ಆದಿತ್ಯ ರಾಮಭಟ್ಟಾಚಾರ್ಯರಿಗೆ ಇವರ ಮೇಲೆ ತುಂಬ ಪ್ರೀತಿ ಇತ್ತು. ಅವರೇ ಮಾಲವೀಯರನ್ನು ಕಾಂಗ್ರೆಸ್ ಅಧಿವೇಶನಕ್ಕೆ ಪರಿಚಯಿಸಿ ಅವರಿಂದ ಭಾಷಣ ಮಾಡಿಸಿದರು. ಅಲ್ಲಿಂದ ತಮ್ಮ ಜೀವನಪರ್ಯಂತ ಸೌಮ್ಯವಾದಿ ನಾಯಕರಾಗಿ ಸೇವೆ ಸಲ್ಲಿಸಿದರು. ಈ ದೀರ್ಘಾವಧಿಯಲ್ಲಿ ಇವರ ಪ್ರಭಾವ ಮುದ್ರೆಗೊಳಗಾಗದ ಯಾವ ಅಧಿವೇಶನವೂ ಇರಲಿಲ್ಲ. 1909 ಮತ್ತು 1918ರಲ್ಲಿ ಎರಡು ಬಾರಿ ಮಹಾಧಿವೇಶನದ ಅಧ್ಯಕ್ಷರೂ ಆಗಿದ್ದರು. 1932 ಮತ್ತು 33ರಲ್ಲಿ ಕಾಂಗ್ರೆಸ್ಸಿನ ಎರಡು ಬಹಿರಂಗ ಅಧಿವೇಶನಗಳ ಅಧ್ಯಕ್ಷರೂ ಆದರು. ಹಿರಿಯ ಸ್ನೇಹಿತರ ಒತ್ತಾಯದ ಮೇರೆಗೆ ಎಲ್.ಎಲ್.ಬಿ. ಸೇರಿ ಅದರಲ್ಲಿ ಉತ್ತೀರ್ಣರಾದ್ದರು (1891). ಅಲಹಾಬಾದ್ ಹೈಕೋರ್ಟಿನಲ್ಲಿ ವಕೀಲರೆಂದು ನೋಂದಣಿ ಮಾಡಿಕೊಂಡರು. ಆದರೆ ಅದರಲ್ಲಿ ಇವರಿಗೆ ಯಶಸ್ಸು ಸಿಗಲಿಲ್ಲ. ತಮ್ಮನ್ನು ಸಂಪೂರ್ಣವಾಗಿ ಸಾರ್ವಜನಿಕ ಕೆಲಸಕ್ಕೆ ಸಮರ್ಪಿಸಿಕೊಳ್ಳಲು ವಕೀಲಿವೃತ್ತಿಯಿಂದ ನಿವೃತ್ತಿ ಪಡೆದರು (1909). ಆದರೂ 1922ರಲ್ಲಿ ಒಮ್ಮೆ ವಕೀಲಿ ಮಾಡುವ ಅನಿವಾರ್ಯಪ್ರಸಂಗ ಇವರ ಪಾಲಿಗೆ ಬಂತು. ಗೋರಖ್‍ಪುರದ ಚೌರಿ ಚೌರದಲ್ಲಿ ನಡೆದ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 225 ಜನರಿಗೆ ಗಲ್ಲು ಶಿಕ್ಷೆ ಆಗಲಿತ್ತು. ಆಗ ಮಾಲವೀಯರು ಪರಿಣಾಮಕಾರಿಯಾಗಿ ವಾದಿಸಿ 153 ಜೀವಗಳನ್ನು ಉಳಿಸುವುದರಲ್ಲಿ ಯಶಸ್ವಿಯಾದರು.

	ಬ್ರಿಟಿಷರ ಒಡೆದು ಆಳುವ ನೀತಿಯನ್ನು ವಿರೋಧಿಸಲು ಹಿಂದೂ ಮಹಾಸಭೆಯನ್ನು ಸ್ಥಾಪಿಸಿ (1906) ಅದರ ಸಂಸ್ಥಾಪಕ ಅಧ್ಯಕ್ಷರೂ ಆದರು. 1914ರಿಂದ 46ರ ತನಕ ಅಖಿಲಭಾರತ ಸೇವಾಸಮಿತಿಯ ಅಧ್ಯಕ್ಷರಾಗಿದ್ದರು. 1914-46ರ ಅವಧಿಯಲ್ಲಿ ಅಗ್ರಪಂಕ್ತಿಯ ಸ್ವರಾಜ್ಯವಾದಿಗಳಲ್ಲೊಬ್ಬರಾದ ಇವರು ತಮ್ಮದೇ ಆದ ಒಂದು ರಾಷ್ಟ್ರೀಯ ಪಕ್ಷವನ್ನು ಸಂಘಟಿಸಿದರು (1926). ಹೀಗೆ ಹತ್ತಾರು ಸಂಘ ಸಂಸ್ಥೆಗಳ ನಾಯಕರಾಗಿ ವ್ಯಾಪಕವಾಗಿ ಜನಜಾಗೃತಿಯನ್ನುಂಟು ಮಾಡಿದರು. ಅಲಹಾಬಾದ್ ಪುರಸಭೆಯ ಉಪಾಧ್ಯಕ್ಷರೂ ಆಗಿದ್ದರು. ಮಾಲವೀಯರು ಪ್ರಾಂತೀಯ ಶಾಸನಸಭೆಯ ಸದಸ್ಯರಾಗಿ ಆಯ್ಕೆಯಾದರು (1902). ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ಮಸೂದೆ, ರೈಲ್ವೆಯ ರಾಷ್ಟ್ರೀಕರಣ. ಪತ್ರಿಕಾ ಕಾಯಿದೆ, ಗ್ರಾಮಪಂಚಾಯಿತಿ ರಚನೆ ಮುಂತಾದ ವಿವಿಧ ವಿಷಯಗಳ ಮೇಲೆ ಇವರು ನಡೆಸಿದ ಮಹತ್ತ್ವಪೂರ್ಣ ಚರ್ಚೆ ಮತ್ತು ಭಾಷಣಗಳು ಅಂದಿನ ಸರ್ಕಾರ ಮತ್ತು ಸಾರ್ವಜನಿಕರಿಗೆ ದಾರಿದೀಪವಾಗಿದ್ದುವು. 1918ರಲ್ಲಿ ರೌಲತ್ ಕಾಯಿದೆಯನ್ನು ವಿರೋಧಿಸಿ 1930ರಲ್ಲಿ ಇಂಪೀರಿಯಲ್ ನೀತಿಯನ್ನು ನಿರಾಕರಿಸಿ ಕೇಂದ್ರ ಶಾಸನ ಸಭೆಗೆ ರಾಜೀನಾಮೆ ನೀಡಿದರು. ಇವರು ವರ್ಣಾಶ್ರಮ ಧರ್ಮವನ್ನು ಮೆಚ್ಚಿದ್ದರೂ, ಅಸ್ಪøಶ್ಯರ ಏಳಿಗೆಗಾಗಿ ಬಹುವಾಗಿ ಶ್ರಮಿಸಿದರು. ಮೇಲ್ವರ್ಗದವರ ತುಳಿತಕ್ಕೊಳಗಾಗಿ ಅನ್ಯಧರ್ಮಾವಲಂಬಿಗಳಾದವರನ್ನು ಮರಳಿ ಮಾತೃಧರ್ಮಕ್ಕೆ ಕರೆತರಲು ಸರಳವಿಧಾನದ ಶುದ್ಧಿಯನ್ನು ರೂಢಿಗೆ ತಂದರು.

	ಮಾಲವೀಯರ ಸಾಧನೆಗಳಲ್ಲೆಲ್ಲ ಅತ್ಯಂತ ಹಿರಿದಾದದ್ದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆ (1915), ಹಿಂದೂ ಧರ್ಮ ಮತ್ತು ವೈದಿಕ ಸಂಸ್ಕøತಿ ಪ್ರಿಯರಾದ ಮಾಲವೀಯರು ತಮ್ಮ ಎಲ್ಲ ಸಂಪನ್ಮೂಲ ಶಕ್ತಿ, ಸಮಯಗಳನ್ನು ಧಾರೆಯೆರೆದು ಸಂಘಟನಾತ್ಮಕ ಪ್ರಯತ್ನದಿಂದ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಇದಕ್ಕೆ ಮಹಾರಾಜರು ಮತ್ತು ಜನತೆಯಿಂದ ದೇಣಿಗೆ ಪಡೆದರು. 1919ರಿಂದ 38ರ ತನಕ ಇದರ ಕುಲಪತಿಯಾಗಿದ್ದು ಅನಾರೋಗ್ಯದ ಕಾರಣ ಆ ಹುದ್ದೆಯನ್ನು ತ್ಯಜಿಸಿದರೂ ತಮ್ಮ ಅಂತ್ಯದ ತನಕವೂ ವಿಶ್ವವಿದ್ಯಾಲಯದ ರೆಕ್ಟರ್ ಆಗಿದ್ದರು.

	ಮಾಲವೀಯರು ಪ್ರಸಿದ್ಧ ಪತ್ರಿಕೋದ್ಯಮಿಯೂ ಹೌದು. 1887ರಿಂದ ಹಿಂದೂಸ್ಥಾನ್ ಎಂಬ ಹಿಂದಿ ವಾರಪತ್ರಿಕೆಯ ಸಂಪಾದಕರಾಗಿದ್ದರು. ಈ ಪತ್ರಿಕೆಯ ಸಂಪಾದಕರಾಗಿ ಅಧಿಕಾರ ಸೂತ್ರ ವಹಿಸಿಕೊಳ್ಳುವಾಗ ರಾಜಾರಾಮ ಪಾಲಸಿಂಹರಿಗೆ ಸಂಪಾದಕರಾಗಿ ಕೆಲಸದಲ್ಲಿ ಎಳ್ಳಿನಷ್ಟೂ ಹಸ್ತಕ್ಷೇಪ ಮಾಡಕೂಡದು ಎಂದು ಒಪ್ಪಂದ ಮಾಡಿಕೊಂಡಿದ್ದರಂತೆ. ಇವರು ಸಂಪಾದಕರಾಗಿದ್ದಾಗಲೆ ಆ ವಾರ ಪತ್ರಿಕೆ ದಿನಪತ್ರಿಕೆಯಾಗಿ ಹೊರಬರತೊಡಗಿತು. ಭಟ್ಟಾಚಾರ್ಯರಿಂದ ಸ್ಥಾಪಿತವಾದ ಇಂಡಿಯನ್ ಯೂನಿಯನ್ ವಾರಪತ್ರಿಕೆಗೆ 1890ರ ತನಕ ಸಂಪಾದಕರಾಗಿದ್ದರು. ಅಭ್ಯುದಯ ಹಿಂದಿ ಸಾಪ್ತಾಹಿಕದ ಸಂಪಾದಕರಾಗಿಯೂ ದುಡಿದರು. ಇವೆಲ್ಲ ಪತ್ರಿಕೆಗಳೂ ದೇಶದ ಸ್ವಾತಂತ್ರ್ಯ ಚಳವಳಿ, ಶಿಕ್ಷಣ, ಸಮಾಜ ಸುಧಾರಣೆ. ಸಾಹಿತ್ಯ, ಸಂಸ್ಕøತಿ ಪ್ರಸಾರದಲ್ಲಿ ಮಹತ್ತರವಾದ ಕಾರ್ಯನಿರ್ವಹಿಸಿದುವು. ಇಂದು ದೆಹಲಿ ನಗರದಿಂದ ಪ್ರಕಟಗೊಳ್ಳುತ್ತಿರುವ ಹಿಂದೂಸ್ಥಾನ್ ಮತ್ತು ಹಿಂದೂಸ್ಥಾನ್ ಟೈಮ್ಸಿನ ನಿರ್ದೇಶಕ ಮಂಡಳಿಯಲ್ಲಿ ಮಾಲವೀಯರು ಚೇರ್ಮನ್ ಆಗಿದ್ದರು (1924-46).

	15ನೆಯ ವಯಸ್ಸಿನಲ್ಲಿಯೇ ಮಕರಂದ ಎಂಬ ಕಾವ್ಯನಾಮದಿಂದ ಕವನ ರಚಿಸುತ್ತಿದ್ದರು. ಇವರ ಮೊದಲ ಕಾವ್ಯರಚನೆ ರಾಧಿಕಾರಾಣಿ. ಇಂಗ್ಲಿಷ್, ಹಿಂದಿ, ಉರ್ದು ಮತ್ತು ಸಂಸ್ಕøತದಲ್ಲಿ ಮಾಲವೀಯರಿಗೆ ಅಸಾಧಾರಣ ಪಾಂಡಿತ್ಯವಿತ್ತು.

	ದೇಶೀಯ ಸಿದ್ಧವಸ್ತುಗಳನ್ನು ಉಪಯೋಗಿಸಲು ಸದಾ ಪ್ರೋತ್ಸಾಹ ನೀಡುತ್ತಿದ್ದ ಇವರು ಉತ್ತರಪ್ರದೇಶದ ಕೈಗಾರಿಕೋದ್ಯಮ ಸಂಘವನ್ನು ಅಲಹಾಬಾದಿನಲ್ಲಿ ಸ್ಥಾಪಿಸಲು ಸಹಾಯಮಾಡಿದರು (1907). ಕೈಗಾರಿಕೋದ್ಯಮ ಆಯೋಗದ ಸದಸ್ಯರಾಗಿದ್ದಾಗ (1916), ಆ ವರದಿ ಭಾರತದ ಕೈಗಾರಿಕಾ ಬೆಳೆವಣಿಗೆಗೆ ಮಾರಕವೆಂಬುದನ್ನು ಅರಿತ ಮಾಲವೀಯರು ಅದನ್ನು ವಿರೋಧಿಸಿ ಆ ವರದಿಯಲ್ಲಿ ಮಹತ್ತ್ವಪೂರ್ಣವಾದ ಅಸಮ್ಮತಿ ಟಿಪ್ಪಣಿ ಬರೆದರು. ಎರಡನೆಯ ದುಂಡುಮೇಜಿನ ಪರಿಷತ್ತಿನಲ್ಲಿ ಗಾಂಧೀಜಿಯವರೊಡನೆ ಇವರೂ ಪಾಲ್ಗೊಂಡಿದ್ದರು (1931). ಈ ಗೋಷ್ಠಿಯಲ್ಲಿ ಮಾಲವೀಯರು ವಹಿಸಿದ ಪಾತ್ರ ಕುರಿತಂತೆ ಮಾಂಟೆಗ್ಯೂ ತಮ್ಮ ಇಂಡಿಯನ್ ಡೈರಿಯಲ್ಲಿ ಉಲ್ಲೇಖಿಸಿದ್ದಾರೆ.
(ಆರ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ